ಅನುವಂಶಿಕ ವರ್ಗೀಕರಣ	
	
ಪರಸ್ಪರ ಹೋಲಿಕೆಯುಳ್ಳ ಭಾಷೆಗಳು ಯಾವುದೊ ಒಂದು ಮೂಲಭಾಷೆಯಿಂದ ಹುಟ್ಟಿ, ಕಾಲಕ್ರಮದಲ್ಲಿ ಕವಲೊಡೆದು ವಿಕಾಸ ಹೊಂದಿರಬೇಕೆಂದು ಭಾವಿಸಿ ವಂಶಗಳ ಗುಣಲಕ್ಷಣಗಳಿಗನುಸಾರವಾಗಿ ಭಾಷೆಗಳನ್ನು ವಿಂಗಡಿಸುವ ವಿಧಾನ (ನೋಡಿ-ಭಾಷೆಗಳ ವರ್ಗೀಕರಣ). ಆಯಾ ಭಾಷೆಗಳಲ್ಲಿರುವ ನಿತ್ಯೋಪಯೋಗಿ ಶಬ್ದಗಳಲ್ಲಿ ಕಂಡುಬರುವ ಸಾಮ್ಯಗಳನ್ನೂ ಭಾಷಾ ವಿಜ್ಞಾನಕ್ಕನುಸಾರವಾಗಿ ನಿರ್ಣಯಿಸಬಹುದಾದ ಧ್ವನ್ಯನುರೂಪತೆಗಳನ್ನೂ ಅವಲಂಬಿಸಿ ಭಾಷಾವಿಜ್ಞಾನಿಗಳು ಅನೇಕ ಭಾಷಾವಂಶಾವಳಿಗಳನ್ನು ವಿಂಗಡಿಸಿರುತ್ತಾರೆ. ಈ ತತ್ತ್ವವನ್ನು ಅನುಸರಿಸಿ ವಿಂಗಡಿಸಿದ ಪರಸ್ಪರ ಸಂಬಂಧವುಳ್ಳ ಭಾಷೆಗಳನ್ನು ಜ್ಞಾತಿ (ಕಾಗ್ನೇಟ್) ಭಾಷೆಗಳು ಎಂದು ಕರೆಯುತ್ತಾರೆ. ಈ ಮೂಲಕ ಆಯಾ ಭಾಷಾವರ್ಗದ ಮೂಲಭಾಷೆಯನ್ನೂ ಅದರ ರಚನೆಯನ್ನೂ ಗುರುತಿಸುವ ಪ್ರಯತ್ನಗಳು ನಡೆದಿವೆ. ಉದಾಹರಣೆಗೆ ದ್ರಾವಿಡ ಭಾಷಾವರ್ಗದಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳ ಮೊದಲಾದ ಗ್ರಾಂಥಿಕಭಾಷೆಗಳಲ್ಲದೆ ಬ್ರಾಹೂಇ, ಕೊತ ಕೊಡವ, ಕೊಲಾಮಿ, ಕೊಂಡ, ಕೂಇ, ಕುವಿ, ಕುರುಖ್, ಮಾಲ್ತೊ, ನಾಯ್ಕಿ, ಪರ್ಜಿ, ತೊದ, ತುಳು, ಬಡಗ, ಮೊದಲಾದ ವ್ಯಾವಹಾರಿಕ ಭಾಷೆಗಳೂ (ಸ್ಫೋಕನ್ ಲ್ಯಾಂಗ್‍ವೇಜಸ್) ಅಡಕವಾಗುತ್ತವೆ. ಈ ಪ್ರಚಲಿತ ಭಾಷೆಗಳ ಆಧಾರದ ಮೇಲೆ ಇಂದು ಅಲಭ್ಯವಾಗಿರುವ ಮೂಲ ದ್ರಾವಿಡಭಾಷೆಯ ಸ್ವರೂಪ ಹೇಗಿರಬಹುದೆಂದು ಪುನರ್ರಚಿಸುವ ಪ್ರಯತ್ನವನ್ನು ದ್ರಾವಿಡಭಾಷಾ ವಿಜ್ಞಾನಿಗಳು ಮಾಡಿರುತ್ತಾರೆ. ಅನುವಂಶಿಕ ವರ್ಗೀಕರಣ ಸಿದ್ಧಾಂತದ ನೆರವಿನಿಂದ ಇಂಥ ಹಲವಾರು ಭಾಷಾ ವಂಶಾವಳಿಗಳನ್ನು ರಚಿಸಲಾಗಿದೆ. 									
	
(ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ